
3rd August 2025
ಕೇವಲ ಒಂದು ದಶಕದ ಹಿಂದೆ ಎಲ್ಲರ ಬಳಿ ಮೊಬೈಲ್ ಫೋನ್ ಇರಲಿಲ್ಲ. ಆಗ ಇಂಟರ್ನೆಟ್ ಸೌಲಭ್ಯ ಕೂಡ ಅಷ್ಟೇನೂ ಸುಲಭವಾಗಿ ದೊರೆಯುತ್ತಿರಲಿಲ್ಲವಾದ ಕಾರಣ ವಿವಿಧ ಗ್ಯಾಜೆಟ್ಗಳನ್ನು ಮಕ್ಕಳು ಬಳಸುವುದು ದೂರವಾಗುತ್ತಿತ್ತು. ಆದರೆ ಕೇವಲ ಕೆಲವೇ ವರ್ಷಗಳಲ್ಲಿ ಅಂತರ್ಜಾಲ ಸೌಲಭ್ಯ ಮನೆಮನೆಯ ಬಾಗಿಲು ತಟ್ಟಿದ್ದು ಎಲ್ಲರ ಕೈಯಲ್ಲೂ ವಿವಿಧ ಬಗೆಯ ಮೊಬೈಲ್ ಸೆಟ್ಟುಗಳು ಇದ್ದು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಹತ್ತು ಹಲವಾರು ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇಂದಿನ ಯುವಶಕ್ತಿಯಲ್ಲಿರುವ ಚೈತನ್ಯ ಕುಗ್ಗುತ್ತಿದೆ.
ಶಿಕ್ಷಣ ಮಕ್ಕಳಲ್ಲಿ ಅತ್ಯವಶ್ಯಕವಾಗಿ ಹೊಂದಲೇಬೇಕಾದದ್ದು. ಒಂದು ಉತ್ತಮ ಬದುಕನ್ನು ಸಾಧಿಸಲು ಪದವಿಯವರೆಗಿನ ಓದು ಅನಿವಾರ್ಯವಷ್ಟೇ ಅಲ್ಲ ಅವಶ್ಯಕತೆಯೂ ಹೌದು.
ಓದಿನ ಜೊತೆ ಜೊತೆಗೆ ಉದ್ಯೋಗ ಮಾಡಲು ಅವಶ್ಯಕವಾದ ಕೌಶಲ್ಯ ತರಬೇತಿಯು ಇಂದಿನ ಮಕ್ಕಳಿಗೆ ಬೇಕೇ ಬೇಕು. ಅಂತರ್ಜಾಲದ ನೆರವಿನಿಂದ ಸಾಮಾಜಿಕ ಜಾಲತಾಣಗಳ ಒಳಹೊಕ್ಕು ತಾಂತ್ರಿಕ ಜ್ಞಾನವನ್ನು ಕೌಶಲ್ಯ ಪರಿಣತಿಯನ್ನು ಪಡೆಯುವ ನಿಟ್ಟಿನಲ್ಲಿ ಮಕ್ಕಳು ಕಾರ್ಯನಿರ್ವಹಿಸಲೇಬೇಕು.
ಪಾಲಕರು ಓದಿನ ವಿಷಯದಲ್ಲಿ ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರದೆ ಅವರಿಗೆ ಆಸಕ್ತಿ ಇರುವ ವಿಷಯಗಳನ್ನು ಕಲಿಯಲು ಅವಕಾಶ ಮಾಡಿಕೊಡಬೇಕು. ಕೇವಲ ಪಾಲಕರು ಇಚ್ಚಿಸುತ್ತಾರೆ ಎಂಬ ಕಾರಣಕ್ಕಾಗಿ ಮಕ್ಕಳು ತಮಗೆ ಆಸಕ್ತಿ ಇಲ್ಲದ ವಿಷಯಗಳನ್ನು ಕಲಿಯಲು ಪ್ರಯತ್ನಿಸಿ ವಿಫಲರಾದಾಗ ಮಾನಸಿಕವಾಗಿ ಇಬ್ಬರೂ ನೋಯಬೇಕಾಗುತ್ತದೆ ಬದಲಾಗಿ ಪಾಲಕರು ಮಕ್ಕಳ ಆಸಕ್ತಿಗೆ ನೀರೆರೆಯಬೇಕು. ಆಗ ಮಾತ್ರ ಮಕ್ಕಳು ತಮ್ಮ ನೂರು ಶೇಕಡಾ ಶ್ರಮವನ್ನು ಹಾಕಿ ಕಲಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರು ಮತ್ತು ಮಕ್ಕಳು ಒಟ್ಟಿಗೆ ಕುಳಿತು ಸಮಾಲೋಚನೆ ಮಾಡುವ ಮೂಲಕ ಒಳಿತು ಕೆಡುಕುಗಳ, ಅವಶ್ಯಕತೆ ಮತ್ತು ಅನವಶ್ಯಕತೆ ಕುರಿತು ಒಂದು ನೇರ ಮತ್ತು ಒಮ್ಮತದ ಅಭಿಪ್ರಾಯಕ್ಕೆ ಬರಬೇಕಾದದ್ದು ಅತ್ಯವಶ್ಯಕ. ಪರಸ್ಪರ ಮಾತುಕತೆ ಮತ್ತು ಸಮಾಲೋಚನೆ ಮಾಡದೆ ಹೋದರೆ ಪಾಲಕರಿಗೆ ತಮ್ಮ ಮಾತನ್ನು ಮಕ್ಕಳು ಕೇಳುತ್ತಿಲ್ಲ ಎಂಬ ಬೇಸರ ಮತ್ತು ಮಕ್ಕಳಿಗೆ ಪಾಲಕರು ತಮ್ಮ ಆಸಕ್ತಿಯನ್ನು ಗುರುತಿಸುವುದಿಲ್ಲ ಎಂಬ ಹತಾಶ ಭಾವಗಳ ನಡುವೆ ಮಗುವಿನ ಭವಿಷ್ಯ ಕಮರಿ ಹೋಗುವ ಸಂದರ್ಭಗಳು ಬರಬಹುದು.
ಇತ್ತೀಚೆಗೆ ಸ್ಕಿಲ್ ಸೆಟ್ ಅಂದರೆ ಕೌಶಲ್ಯಗಳ ಗುಚ್ಛ ಎಂದು ಹೇಳುವ ಹೊಸ ಹೊಸ ಕಲಿಕಾ ವಿಧಾನಗಳನ್ನು ನಾವು ಕಾಣಬಹುದು. ಕೇವಲ ಒಂದು ವಿಷಯವನ್ನು ಪಠ್ಯಕ್ರಮವಾಗಿ ಓದುವ ಸಮಯದಲ್ಲಿ ಆ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳು ಅರಿವನ್ನು ಮೂಡಿಸಿಕೊಳ್ಳುವುದನ್ನು ಸ್ಕಿಲ್ ಸೆಟ್ ಹೊಂದುವುದು ಎಂದು ಹೇಳಲಾಗುತ್ತದೆ. ಉದಾಹರಣೆಯನ್ನು ನೀಡುವುದಾದರೆ ಶಿಕ್ಷಕನಾದವನು ಕೇವಲ ಪಾಠ ಮಾಡುವುದಕ್ಕೆ ಮಾತ್ರ ಸೀಮಿತನಾಗದೆ ಮಗುವಿನ ಮಾನಸಿಕ ಆರೋಗ್ಯ ದೈಹಿಕ ಬೆಳವಣಿಗೆ ಮತ್ತು ಮಕ್ಕಳಲ್ಲಿ ಉತ್ಸಾಹ ಹುಮ್ಮಸ್ಸನ್ನು ತುಂಬಿ ಮುಂದಿನ ಬದುಕಿಗೆ ಅವರನ್ನು ಯಾವ ರೀತಿ ತಯಾರು ಮಾಡಬೇಕು ಎಂಬ ಕುರಿತು ಅರಿವನ್ನು ಹೊಂದುವ ಹತ್ತು ಹಲವು ತರಬೇತಿಗಳನ್ನು ಆ ನಿಟ್ಟಿನಲ್ಲಿ ಪಡೆಯುವ ಮೂಲಕ ಕೌಶಲ್ಯವನ್ನು ಅಭಿವೃದ್ಧಿ ಮಾಡಿಕೊಳ್ಳುತ್ತಾನೆ.
ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿರುವವರು ಕೋಡಿಂಗ್ ಮಾಡುವುದನ್ನು, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು, ಸ್ಟಾರ್ಟ್ ಅಪ್ ಗಳಲ್ಲಿ ಕೆಲಸ ನಿರ್ವಹಿಸುವುದನ್ನು, ಸಂವಹನ ಕಲೆಯನ್ನು ಕಲಿಯುತ್ತಾರೆ. ಇವುಗಳನ್ನು ಸ್ಕಿಲ್ ಸೆಟ್ ಎಂದು ನಾವು ಕರೆಯಬಹುದು.
ಓದು ಮುಗಿದ ನಂತರ ಉದ್ಯೋಗದಲ್ಲಿ ಮುಂದುವರೆಯುವಾಗ ಕೇವಲ ನಮ್ಮ ಅಂಕಪಟ್ಟಿಯನ್ನು ಮಾತ್ರ ನೋಡಿ ನೌಕರಿ ಕೊಡುವುದು ಇದೀಗ ಕನಸಿನ ಮಾತು ಬದಲಾಗಿ ಒಂದು ವಿಷಯದ ಕುರಿತು ನಾವು ಹೊಂದಿರುವ ಜ್ಞಾನ, ವೈವಿಧ್ಯಮಯ ಅರಿವನ್ನು ಹೊಂದಿದ್ದರೆ ಒಳ್ಳೆಯ ಕೆಲಸ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಓದಿನ ಜೊತೆ ಜೊತೆಗೆ ಸಂವಹನ ಕೌಶಲ್ಯ, ಡಿಜಿಟಲ್ ಮಾರ್ಕೆಟಿಂಗ್, ಪ್ರಸ್ತುತ ಮಾರುಕಟ್ಟೆಯ ಅರಿವು ಹೀಗೆ ಹತ್ತು ಹಲವು ವಿಷಯಗಳ ಕುರಿತು ಜ್ಞಾನ ವೃದ್ಧಿಸಿಕೊಳ್ಳಬೇಕು.
ಹೋಟೆಲ್ ಮ್ಯಾನೇಜ್ಮೆಂಟ್ ಕಲಿಯುವ ವಿದ್ಯಾರ್ಥಿ ಕೇವಲ ಹೋಟೆಲ್ ಗೆ ಸಂಬಂಧಿಸಿದ ವಿಷಯಗಳ ಕುರಿತು ಪಠ್ಯವಾಗಿ ಕಲಿಯಬಹುದು ಜೊತೆಗೆ ಆರೋಗ್ಯಕರ ಆಹಾರ, ಆಹಾರದ ಗುಣಮಟ್ಟ, ಗ್ರಾಹಕರೊಂದಿಗಿನ ಸಂವಹನ, ಗ್ರಾಹಕರನ್ನು ಆಕರ್ಷಿಸಲು ಕೈಗೊಳ್ಳಬೇಕಾದ ಕ್ರಮಗಳು ಸಿಬ್ಬಂದಿಗಳ ನಿರ್ವಹಣೆ ಹೇಗೆ ಹತ್ತು ಹಲವು ವಿಷಯಗಳ ಕುರಿತು ಜ್ಞಾನವನ್ನು ಹೊಂದಿರಬೇಕು.
ನಾನು ಈ ಮೊದಲು ವಿಜ್ಞಾನದ ವಿದ್ಯಾರ್ಥಿಯಾಗಿದ್ದೆ ಇದೀಗ ವಾಣಿಜ್ಯ ವಿಷಯವನ್ನು ತೆಗೆದುಕೊಂಡಿರುವ ನನಗೆ ಈ ಮೊದಲಿನ ವಿಜ್ಞಾನ ವಿಷಯ ಎಳ್ಳಷ್ಟು ಉಪಯೋಗವಾಗುವುದಿಲ್ಲ ಎಂಬ ನಿರಾಶೆ ಬೇಡ. ಕಲಿತ ವಿದ್ಯೆ ಬದುಕಿನ ಯಾವುದೇ ಘಟ್ಟದಲ್ಲಿಯೂ ನಮಗೆ ಸಹಾಯ ಮಾಡಬಹುದು.
ವಿವಿಧ ವಿಷಯಗಳ ಕುರಿತ ಅರಿವನ್ನು ಹೊಂದಿದ್ದು ಸಕಾಲದಲ್ಲಿ ಅವುಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿ ತನ್ನ ಸರ್ವತೋಮುಖ ಬೆಳವಣಿಗೆಗೆ ಕಾರಣನಾಗಬೇಕು ಬದುಕಿನಲ್ಲಿ ಯಶಸ್ಸನ್ನು ಕಾಣಬೇಕು ಆ ನಿಟ್ಟಿನಲ್ಲಿ ಓದಿನ ಜೊತೆ ಜೊತೆಗೆ ಕೌಶಲ್ಯ ಅಭಿವೃದ್ಧಿ ಅತ್ಯವಶ್ಯಕ ಎಂಬ ಅರಿವನ್ನು ಪಾಲಕರು ಹೊಂದಿ ತಮ್ಮ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಲೇಬೇಕಾದದ್ದು ಪಾಲಕರ ಆದ್ಯ ಕರ್ತವ್ಯ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ಕೊಪ್ಪಳ ಖಾದಿ ಉತ್ಸವ ಮೂರು ದಿನದಲ್ಲಿ ಏಳು ಸಾವಿರ ಜನ ಭೇಟಿ:21.84 ಲಕ್ಷ ವಸ್ತುಗಳು ಮಾರಾಟ